ಕೆಂಪು 

ಸುಂದರವಾದ ಹಾಗೂ ಪಾರಕವಾದ ರಕ್ತವರ್ಣದ ಕುರಂದ ಖನಿಜದ ಹರಳು (ರೂಬಿ).  ಇದನ್ನು ರತ್ನರಾಜ ಅಥವಾ ರತ್ನನಾಯಕ ಎಂದು ಕರೆಯುವ ವಾಡಿಕೆಯಿದೆ.  ರಾಸಾಯನಿಕ ಸಂಯೋಜನೆಯಲ್ಲಿ ಕೆಂಪು ಕುರಂದ ಸಂಪೂರ್ಣವಾಗಿ ಅಲ್ಯೂಮಿನಿಯಂ ಆಕ್ಸೈಡ್ ಆಗಿದ್ದರೂ ಕೊಂಚ ಪ್ರಮಾಣದಲ್ಲಿ ಕ್ರೋಮಿಯಂ ಆಕ್ಸೈಡ್ ಸೇರುವಿಕೆಯಿಂದ ಇದಕ್ಕೆ ಕೆಂಪು ವರ್ಣ ಬಂದಿರುತ್ತದೆ.  ಹಾಗೆಂದಲ್ಲಿ ಗಣಿಯಿಂದ ಹೊರಬರುವ ಎಲ್ಲ ಕೆಂಪು ಕುರಂದಗಳ ಬಣ್ಣವೂ ಒಂದೇ ಸಮವಾಗಿರುವುದಿಲ್ಲ.  ಕೆಲವು ತಿಳಿಗೆಂಪು, ಮತ್ತೆ ಕೆಲವು ಮಾಸಲುಗೆಂಪು.  ಅಲ್ಲದೆ ಹರಳಿನ ಬಣ್ಣ ಒಂದೇ ರೀತಿಯಿರದೆ ಕೆಲವು ಭಾಗಗಳಲ್ಲಿ ಬಣ್ಣ ತಿಳಿಯಾಗಿಯೂ ಮತ್ತೆ ಕೆಲವು ಭಾಗಗಳಲ್ಲಿ ಗಾಢವಾಗಿಯೂ ಇರುವುದುಂಟು.  ತಿಳಿಗೆಂಪು ಹರಳುಗಳಿಗಿಂತ ಪಾರಿವಾಳ ರಕ್ತವರ್ಣದ ಹರಳುಗಳೇ ಅತ್ಯಂತ ಅಮೂಲ್ಯವಾದವು.  ನವರತ್ನವೆನಿಸಲು ಬಣ್ಣ ಒಂದೇ ಸಾಲದು.  ಹರಳುಗಳು ಪಾರಕವಾಗಿರಬೇಕು.  ಪಾರಕವಾಗಿರುವ ಕೆಂಪು ರತ್ನವೆನಿಸುತ್ತದೆ.  ಸಣ್ಣ ಕೆಂಪುಗಳಿಗೆ ಅದೇ ಗಾತ್ರದ ವಜ್ರಗಳಿಗಿಂತಲೂ ಬೆಲೆ ಕಡಿಮೆಯಾದರೂ ದೊಡ್ಡ ಕೆಂಪುಗಳಿಗೆ ಅದೇ ಗಾತ್ರದ ವಜ್ರಕ್ಕಿಂತಲೂ ಬೆಲೆ ಹೆಚ್ಚು.  ಇದಕ್ಕೆ ಕಾರಣ ದೊಡ್ಡದಾದ ಮತ್ತು ಉತ್ಕøಷ್ಟವಾದ ಕೆಂಪು ರತ್ನಗಳು ಸಿಕ್ಕುವುದು ಅತಿ ವಿರಳ.  ಸಾಮಾನ್ಯವಾಗಿ ಕೆಂಪು ಹರಳುಗಳಲ್ಲಿ ಸೂಕ್ಷ್ಮವಾದ ಎಳೆಗಳು ದೋಷಗಳಾಗಿ ಸೇರಿಕೊಂಡಿರುತ್ತವೆ.  ಹರಳನ್ನು ಅಂಡಾಕೃತಿಗೆ ಸಾಣೆ ಹಿಡಿದಾಗ ಈ ಎಳೆಗಳು ಆರು ಮೂಲೆಯ ನಕ್ಷತ್ರಗಳಂತೆ ಗೋಚರಿಸುತ್ತವೆ.  ಇಂಥವನ್ನು ಸ್ಟಾರ್ ರೂಬಿ ಅಥವಾ ನಕ್ಷತ್ರ ಕೆಂಪುಗಳೆನ್ನುತ್ತಾರೆ.

ಕೆಂಪು ಕುರಂದ ಕಾಠಿಣ್ಯದಲ್ಲಿ ವಜ್ರಕ್ಕೆ ಎರಡನೆಯದು.  ಈ ಸ್ವಭಾವದಿಂದ ಕೆಂಪನ್ನು ಆಭರಣಗಳಲ್ಲಿ ಮಾತ್ರವಲ್ಲದೆ, ಗಡಿಯಾರ ಮುಂತಾದ ಸೂಕ್ಷ್ಮ ಯಂತ್ರಗಳಲ್ಲಿ ಘರ್ಷಕ ನಿರೋಧಕ ಸಾಧನವಾಗಿ ಬಳಸುತ್ತಾರೆ.  ಕೆಂಪುರತ್ನಗಳು ಹರಳುಗಳಾಗಿ ಸೈಯನೈಟ್, ಸೆಫಲೀನ್ ಸೈಯನೈಟ್, ಪೆರಿಡೊಟೈಟ್ ಮತ್ತು ಅನಾರ್ಥೊಸೈಟ್ ವರ್ಗದ ಅಗ್ನಿಶಿಲೆಗಳಲ್ಲೂ ಅಮೃತಶಿಲೆಗಳಂಥ ರೂಪಾಂತರಿತ ಶಿಲೆಗಳಲ್ಲೂ ಸಿಕ್ಕುತ್ತವೆ.  ಇದಲ್ಲದೆ ನದಿಯ ಮೆಕ್ಕಲುಗಳಲ್ಲೂ ಹಲವು ಕಡೆ ದೊರೆಯುತ್ತವೆ.  ವಿಖ್ಯಾತವಾದ ಮೊಗಾಕ್ ಕೆಂಪುಗಳು ದೊರೆತದ್ದು ನದಿಯ ಮೆಕ್ಕಲಿನಲ್ಲಿಯೇ.

ಬಹು ಹಿಂದಿನಿಂದಲೂ ಉತ್ತಮ ದರ್ಜೆಯ ಕೆಂಪುಗಳಿಗೆ ಬರ್ಮದ ಮೊಗಾಕ್ ಜಿಲ್ಲೆ ತೌರುಮನೆ.  ಈ ಪ್ರದೇಶ ಉತ್ತರ ಬರ್ಮದಲ್ಲಿರುವ ಮಾಂಡಲೆ ಪಟ್ಟಣಕ್ಕೆ ಸುಮಾರು 161 ಕಿ.ಮೀ. ದೂರದಲ್ಲಿದೆ.  ಬರ್ಮ ದೊರೆಗಳು ಇಲ್ಲಿಯ ಗಣಿಗಳ ಒಡೆಯರಾಗಿದ್ದರು.  ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಮೇಲೆ ಈ ಗಣಿಗಳು ಪರಿಮಿತ ಕಂಪನಿಯಾಗಿ ಪರಿವರ್ತನೆಯಾದುವು (1889).  ಬಹಳ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಈ ಗಣಿಗಳಿಂದ ವರ್ಷಕ್ಕೆ ಸುಮಾರು 2,00,000 ಕ್ಯಾರಟ್ಟು ಕೆಂಪು ಉತ್ಪತ್ತಿಯಾಗುತ್ತಿತ್ತು.  ಬರ್ಮ ದೇಶದಿಂದ ಯೂರೋಪಿಗೆ ರವಾನೆಯಾದ ಕೆಂಪುಗಳಲ್ಲಿ ಅತಿ ಸೊಗಸಾದ ಹರಳುಗಳು ಎರಡು ಮಾತ್ರ..  ಸಾಣೆ ಹಿಡಿದ ಮೇಲೆ ಇವುಗಳ ತೂಕ 32.3125 ಕ್ಯಾರಟ್ಟು ಮತ್ತು 38.5625 ಕ್ಯಾರಟ್ಟು..  ಮಾರಾಟವಾದ ಮೇಲೆ ಅನುಕ್ರಮವಾಗಿ ಇವೆರಡಕ್ಕೆ ಬಂದ ಬೆಲೆ 1.5 ಲಕ್ಷ ರೂಪಾಯಿಗಳು ಮತ್ತು 3 ಲಕ್ಷ ರೂಪಾಯಿಗಳು.  ಇದುವರೆಗೆ ತೆಗೆದ ಕೆಂಪು ಹರಳುಗಳಲ್ಲಿ ಅತ್ಯಂತ ಹೆಚ್ಚಿನ ತೂಕದ್ದು 304 ಕ್ಯಾರಟ್ಟುಗಳು.

ಬರ್ಮದೇಶ ಬಿಟ್ಟರೆ ಕೆಂಪು ದೊರೆಯುವ ಪ್ರದೇಶಗಳು ಸಯಾಂ, ಆಘ್ಘಾನಿಸ್ತಾನ, ಕಾಂಬೋಡಿಯ, ಶ್ರೀಲಂಕಾ ಮತ್ತು ಭಾರತ.  ಭಾರತದಲ್ಲಿ ದೊರೆಯುವ ಮುಖ್ಯ ಸ್ಥಳಗಳು ಕೇವಲ ಕೆಲವೇ ಕೆಲವು.  ತಮಿಳುನಾಡಿನ ತಿರುಚಿನಾಪಳ್ಳಿಯ ಕಿರನೂರಿನ ಹತ್ತಿರವೂ ಸೇಲಂ ಜಿಲ್ಲೆಯ ಕೆಲವು ಕಡೆಗಳಲ್ಲೂ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಮೇಲುಕೊಪ್ಪ, ಶೃಂಗೇರಿ ಹತ್ತಿರದ ಕಾಡುಮನೆ, ಕೋಲಾರ ಜಿಲ್ಲೆಯ ಕಾಮಸಂದ್ರ, ಮೈಸೂರು ಜಿಲ್ಲೆಯ ಕುಪ್ಯ ಹಾಗೂ ಬೂದಿಪಡಗ ಎಂಬ ಸ್ಥಳಗಳಲ್ಲಿಯೂ ಕೆಂಪು ದೊರೆಯುತ್ತದೆ.

ಸ್ವಾಭಾವಿಕವಾಗಿ ದೊರೆಯುವ ಕೆಂಪುಗಳ ಜೊತೆಗೆ ಕೃತಕವಾಗಿಯೂ ಕೆಂಪು ಹರಳುಗಳನ್ನು ತಯಾರಿಸಬಹುದು.  ಹೀಗೆ ಮಾಡುವಾಗ ಕೆಲವು ದೊಡ್ಡ ಹರಳುಗಳನ್ನು ಪಡೆಯುವುದು ಕೂಡ ಸಾಧ್ಯ.  ಸಾಧಾರಣವಾಗಿ ಎಲ್ಲ ಗುಣಗಳಲ್ಲಿಯೂ ಕೃತಕ ಕೆಂಪುಗಳು ನೈಜ ಕೆಂಪುಗಳನ್ನು ಹೋಲುವುವಾದರೂ ಕೃತಕ ಕೆಂಪುಗಳಿಗೆ ಮಾರುಕಟ್ಟೆಯಲ್ಲಿ ಅಷ್ಟಾಗಿ ಬೆಲೆ ದೊರೆಯುವುದಿಲ್ಲ. 

	(ಎಂ.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ